ಬೆಂಗಳೂರು, (www.thenewzmirror.com) ;
ಏರ್ ಪೋರ್ಟ್ ರಸ್ತೆ ಬಳಸುವವರಿಗೊಂದು ಶಾಕಿಂಗ್ ನ್ಯೂಸ್ ಲಭ್ಯವಾಗಿದೆ. ಮುಂದಿನ ನಾಲ್ಕು ತಿಂಗಳ ಕಾಲ ಹೆಬ್ಬಾಳ ಫ್ಲೈ ಓವರ್ ನಲ್ಲಿ ಕಾಮಗಾರಿಯಿಂದಾಗಿ ಟ್ರಾಫಿಕ್ ಕಿರಿ ಕಿರಿ ತಪ್ಪೋದಿಲ್ಲ. ಹೀಗಾಗಿ ಪರ್ಯಾಯ ರಸ್ತೆ ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಸುಮಾರು 4 ತಿಂಗಳು ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಲಿದೆ. ಹೆಬ್ಬಾಳ ಫ್ಲೈ ಓವರ್‌ಗೆ ಎರಡು ಹೊಸ ಟ್ರ್ಯಾಕ್‌ಗಳನ್ನು ಸೇರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿಸಿದೆ. ಹೀಗಾಗಿ ಹೆಬ್ಬಾಳ ಫ್ಲೈ ಓವರ್ ನಲ್ಲಿ ಪೀಕ್ ಅವರ್ ನಲ್ಲಿ ಕಿಲೋ ಮೀಟರ್ ಗಟ್ಟಲೇ ವಾಹನ ದಟ್ಟಣೆ ಉಂಟಾಗೋದ್ರಲ್ಲಿ ಅನುಮಾನವಿಲ್ಲ. ಕೆ. ಆರ್. ಪುರ ಲೂಪ್ ಮುಖ್ಯ ಟ್ರ್ಯಾಕ್ ಬಳಿ ಸೇರುವ ಎರಡು ಸ್ಕ್ಯಾನ್‌ಗಳನ್ನು ಕಿತ್ತು ಹಾಕಲಾಗುತ್ತದೆ. ಇದರಿಂದ ಕೆ. ಆರ್. ಪುರ ಲೂಪ್‌ನಲ್ಲಿ ಮುಂದಿನ 4 ತಿಂಗಳವರೆಗೆ ನಗರದ ಕಡೆಗೆ ಸಂಚಾರ ನಿಧಾನವಾಗಲಿದೆ. ವಾಹನ ಸವಾರರು ಇದಕ್ಕೆ ಸಹಕರಿಸಬೇಕು ಎಂದು ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.


ಹೆಬ್ಬಾಳ ಮೇಲ್ಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು, ಬಿಡಿಎ ಅಧಿಕಾರಿಗಳು ಹ ತಜ್ಞರ ಜೊತೆ ಹಲವು ಬಾರಿ ಚರ್ಚೆ ನಡೆಸಿ ಫ್ಲೈ ಓವರ್ ವಿಸ್ತರಣೆಯ ಯೋಜನೆಯನ್ನ ಬಿಡಿಎ ಕೈಗೆತ್ತಿಕೊಂಡಿತ್ತು. ಆದ್ದರಿಂದ ಕೆ. ಆರ್. ಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನ ಸವಾರರು ಪರ್ಯಾಯ ಮಾರ್ಗಗಳಾದ ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರಂ ಮೇಲ್ಸೇತುವೆ ಮಾರ್ಗ, ನಾಗವಾರ-ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬೇಕಿದೆ. ಹಾಗೆನೇ ಹೆಗಡೆ ನಗರ-ಥಣಿಸಂದ್ರ ಕಡೆಯಿಂದ ಬರುವ ಜನರು ಜಿ.ಕೆ.ವಿ.ಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸುತ್ತಾರೆ. ವಾಹನ ಸವಾರರು ಸಂಚಾರಿ ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದಾಗ ಕೆ. ಆರ್. ಪುರ ಲೂಪ್ ಮತ್ತು ಕ್ಯಾರೇಜ್ ಮಾರ್ಗದ ವಿಭಜಕದಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದಿತ್ತು. ಮೇಲ್ಸೇತುವೆ ರಸ್ತೆಯನ್ನು ಮತ್ತೆ ತೆರೆಯಲು ಸಾಧ್ಯವಾದರೆ ಕೆ. ಆರ್. ಪುರ ಮಾರ್ಗದ (ಬೆಂಗಳೂರು ನಗರದ ಕಡೆ) ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ಅಂದಾಜಿಸಲಾಗಿತ್ತು.