ಬೆಂಗಳೂರು, (www.thenewzmirror.com) ;
ಬೆಂಗಳೂರು ವಿಶ್ವವಿದ್ಯಾಲಯ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಡಿ.ದೇವರಾಜು ಅರಸುರವರು ಕುರಿತ 83 ಲೇಖನಗಳನ್ನೊಳಗೊಂಡ ಡಿ.ದೇವರಾಜು ಅರಸು : ಯುವಸ್ಪಂದನೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಪುಸ್ತಕ ಬಿಡುಗಡೆಗೊಳಿಸಿದರೆ, ವಿಚಾರ ಸಂಕೀರಣವನ್ನ ಕೊಪ್ಪಳ ಕುಲಪತಿ ಬಿ.ಕೆ.ರವಿ ಉದ್ಘಾಟಿಸಿದರು.
ಪುಸ್ತಕ ಬಿಡುಗಡೆ ಬಳಿಕ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, ಅರಸು ಎಂದಿಗೂ ಮನೆತನದ ಸೋಂಕಿಗೆ ಒಳಗಾಗದೆ ಶ್ರಮಿಕ, ಕೃಷಿ ವಾತವರಣರಕ್ಕೆ ಒಳಗಾಗಿ ದುರ್ಬಲ, ಶೋಷಿತ ವರ್ಗಕ್ಕೆ ಶಕ್ತಿ ಕೊಟ್ಟಿದ್ದಾರೆ. ದೇಶದ ಚರಿತ್ರೆ, ಸಂವಿಧಾನ, ಸಾಮಾಜಿಕ ಸಂರಚನೆ ಬಗ್ಗೆ ಸುಧೀರ್ಘವಾಗಿ ಅಧ್ಯಯನ ಮಾಡಿದ್ದ ಮಹಾ ಓದುಗರಾಗಿದ್ದರು. ಜಾತಿ ರಾಜಕಾರಣವನ್ನು ಹೊರತುಪಡಿಸಿ ಶಕ್ತಿ ರಾಜಕಾರಣ ಸೃಷ್ಟಿ ಮಾಡಿದ್ದರು, ಶೋಷಿತರ ಕಷ್ಟಗಳನ್ನು ಅರಿತು ಕ್ರಾಂತಿಕಾರಿ ನಿರ್ಧಾರಗಳ ಮೂಲಕ ದಮನಿತರಿಗೆ ಬದುಕು ಕಟ್ಟಿಕೊಟ್ಟರು. ಆದರೆ ರಾಜಕೀಯವಾಗಿ ಅವರಿಗೆ ದೊಡ್ಡ ವಿರೋಧಿ ಬಣ ಸೃಷ್ಟಿಯಾಗಿತ್ತು. ಸತ್ಯದ ಪರ ಹೋರಾಡಿದವರಿಗೆ ವಿರೋಧವೆ ಹೆಚ್ಚು ಎಂಬುದಕ್ಕೆ ಅರಸುರವರೆ ಉದಾಹರಣೆ. ಈ ಎಲ್ಲಾ ವಿರೋಧದ ನಡುವೆಯೂ ಅವರು ತೆಗೆದುಕೊಂಡು ನಿರ್ಧಾರಗಳು ಶತಮಾನಗಳೆ ಸ್ಮರಿಸುವಂತದ್ದು ಎಂದು ದೇವರಾಜು ಅರಸುರವರ ಸಾಧನೆಗಳ ಬಗ್ಗೆ ನೆನಪು ಮಾಡಿಕೊಂಡರು.
ವಿಚಾರ ಸಂಕಿರಣ ಉದ್ಘಾಟಿಸಿದ ಕೊಪ್ಪಳ ಕುಲಪತಿ ಬಿ.ಕೆ ರವಿ ಮಾತನಾಡಿ, ದೇವರಾಜು ಅರಸುರವರು ತಾಯಿ ಹೃದಯದವರು ಹಾಗಾಗಿ ಶೋಷಿತರಿಗೆ ಧ್ವನಿಯಾಗಿದ್ದರು. ಉಳುವವನೆ ಭೂಮಿ ಒಡೆಯ ಕಾಯ್ದೆ ತಂದರು, ಜೀತಪದ್ದತಿಯನ್ನ ಹೋಗಲಾಡಿಸಿದರು. ಹಾವನೂರು ಆಯೋಗದ ವರದಿ ಜಾರಿ ಮಾಡಿದರು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಕ್ರಾಂತಿಕಾರಿ ಯೋಜನೆಗಳ ರೂಪಿಸಿ ದೇಶದಲ್ಲಿ ಸಂವಿಧಾನದ ಆಶಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು ಡಿ.ದೇವರಾಜು ಅರಸು. ಅವರ ಕೊಡುಗೆಯನ್ನು ಯುವ ಪೀಳಿಗೆ ಸ್ಮರಿಸಬೇಕು,ಅವರ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ 18 ಕ್ಕೂ ಹೆಚ್ಚು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು,ಸಂಶೋಧಕರು,ವಿದ್ಯಾರ್ಥಿಗಳು ಭಾಗವಹಿಸಿ ಡಿ.ದೇವರಾಜು ಅರಸುರವರ ಕುರಿತಾದ ಪ್ರಬಂಧಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ.ನಲ್ಲಿಕುಂಟೆ ವೆಂಕಟೇಶಯ್ಯ,ಕುಲಪತಿ ಡಾ.ಜಯಕರ ಎಸ್ ಎಂ,ಕುಲಸಚಿವ ಶೇಕ್ ಲತೀಫ್,ಹಿಂದುಳಿದ ವರ್ಗಗಳ ಕೋಶದ ವಿಶೇಷಾಧಿಕಾರಿ ಮತ್ತು ಪುಸ್ತಕದ ಸಂಪಾದಕ ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ್ ಉಪಸ್ಥಿತರಿದ್ದರು.