ಬೆಂಗಳೂರು, (www.thenewzmirror.com) ;
ಉಪೇಂದ್ರ (Upendra) ಅವರ ನಿರ್ದೇಶನದ ಸಿನಿಮಾಗಳು ಎಂದರೆ ಭಿನ್ನವಾಗಿರುತ್ತವೆ. ಈ ಕಾರಣದಿಂದಲೇ ‘UI’ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಕನ್ನಡದ ಬಹು ನಿರೀಕ್ಷಿತ ಕನ್ನಡದ ಪ್ಯಾನ್ ಇಂಡಿಯಾ ಸಿನೆಮಾ ಯುಐನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ಇಂದು ಅರ್ಪಣೆ ಮಾಡಲಾಯ್ತು.
ಈ ಚಿತ್ರದ ಟೀಸರ್ ಅನ್ನು ಶಿವರಾಜ್ಕುಮಾರ್ ಹಾಗೂ ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಬಿಡುಗಡೆ ಮಾಡಿದ್ರು. ಹಾಗೆನೇ ಟ್ವಿಟರ್ನಲ್ಲಿ ಕಿಚ್ಚ ಸುದೀಪ್ ಅವರು ಈ ಟೀಸರ್ ಬಿಡುಗಡೆ ಮಾಡಿದ್ದು ಮತ್ತೊಂದು ವಿಶೇಷ.
ಈಗಾಗಲೇ ಉಪೇಂದ್ರ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿ, ನಿರ್ದೇಶದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕೇವಲ ನಟನೆ ಮಾಡ್ತಿದ್ದ ಅವ್ರ ನಿರ್ದೇಶನದಿಂದ ಒಂದು ಅದ್ಭುತ ಸಿನೆಮಾ ಬೇಕೆಂದು ಅಭಿಮಾನಿಗಳು ಮನವಿ ಮಾಡ್ತಿದ್ರು. ಅಂತಿಮವಾಗಿ ನಟ ಉಪೇಂದ್ರ ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದು, ನಿರೀಕ್ಷೆ ಸೃಷ್ಟಿ ಆಗಿದೆ.
ಈ ಜಗತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಲ್ಲ ಬದಲಾಗಿ ಯೂನಿವರ್ಸಲ್ ಇಂಟಲಿಜೆನ್ಸ್ ಎನ್ನುವಂತೆ ಟೀಸರ್ ಆರಂಭದಲ್ಲಿ ಇದು ಎಐ ಜಗತ್ತಲ್ಲ. ಇದು ಯುಐ ಜಗತ್ತು ಎಂದು ಹೇಳುವ ಲೈನ್ ಆರಂಭದಲ್ಲೇ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಟೀಸರ್ ಹಾಲಿವುಡ್ ಸಿನೆಮಾದ ಆರಂಭದ ಸೀನ್ ಕಣ್ಮುಂದೆ ಬರುತ್ತೆ.
ಉಪೇಂದ್ರ ಬಿಡುಗಡೆ ಮಾಡಿದ ಈ ಟೀಸರ್ ಇತ್ತೀಚೆಗೆ ಬಿಡುಗಡೆಯಾದ ಬಹುತೇಕ ಟೀಸರ್‌ಗಳಿಂದ ಭಿನ್ನವಾಗಿದೆ. ಸಮ್‌ಥಿಂಗ್ ಡಿಫರೆಂಟ್ ಇರೋ ಫೀಲ್ ನೀಡುತ್ತದೆ. ಪೈರೆಟಸ್ ಆಫ್ ಕ್ಯಾರೀಬೀನ್‌ನ ಲೋಕವೋ ಎಂಬ ಭ್ರಮೆ ಹುಟ್ಟಿಸುತ್ತದೆ.
ಬಿಡುಗಡೆಯಾದ ಯುಐ ಸಿನಿಮಾದ ಫಸ್ಟ್ ಲುಕ್ ಟೀಸರ್ ನಮ್ಮನ್ನು ಹೊಸ ಫ್ಯಾಂಟಸಿ ಜಗತ್ತಿಗೆ ಕರೆದೊಯ್ಯುತ್ತದೆ. ಮೊದ ಮೊದಲು ಅವತಾರ್ ಸಿನೆಮಾ ನೆನಪು ಮಾಡುವ ಟೀಸರ್ ನಲ್ಲಿ ಅವತಾರ್ ವೇಷದಲ್ಲಿರುವ ಯುವಕ ಹಾಗೂ ಯುವತಿ ಎಂಟ್ರಿ ಆಗ್ತಾರೆ.., ಅದಾಗ್ತಾ ಇದ್ದಂತೆ ಇದು ಎಐ ಜಗತ್ತು ಅಲ್ಲ, ಇದು ಯುಐ ಜಗತ್ತು ಎಂಬ ಹಿನ್ನೆಲೆ ಧ್ವನಿಯೂ ಕೇಳಿಸುತ್ತದೆ. ಮರದ ಟೊಂಗೆಯಲ್ಲೊಂದು ಹಾವೊಂದು ಸರಿಯುತ್ತದೆ.
ಕಾಡುಮೇಡು ನದಿ ಕೊಳ, ಬೆಟ್ಟ ಗುಡ್ಡಗಳನ್ನ ದಾಟಿಕೊಂಡು ಒಂದು ನಗರದೊಳಗೆ ನಮ್ಮನ್ನು ಕರೆದೊಯ್ಯುತ್ತೆ. ಇದಾಗ್ತಾ ಇದ್ದಂತೆ ಅಲ್ಲಿಂದ ಒಬ್ಬ ರಾಜನಂತಹ ವ್ಯಕ್ತಿ ಇಳಿಯುತ್ತ ಬರುತ್ತಾನೆ. ಯಾವುದೋ ಹಾಸ್ಯ ಜಗತ್ತೋ ಅಥವಾ ಫ್ಯಾಂಟಸಿ ವರ್ಲ್ಡೋ ಎಂಬ ಗೊಂದಲ ಮೂಡಿಸುತ್ತದೆ. ಮುಖಕ್ಕೆ ಜೋಕರ್ ಬಣ್ಣ ಹಚ್ಚಿರುವ ಹಲವರು ಕಾಣಿಸುತ್ತಾರೆ. ಸಾಧು ಕೋಕಿಲ ಲಕಲಕ ಎಂದು ನಕ್ಕಾಗ ನಿಮ್ಮ ಮುಖದಲ್ಲೂ ನಗು ಮೂಡಬಹುದು. ಅಲ್ಲಿಂದ ಯುದ್ಧದ ಜಗತ್ತಿಗೆ ಟೀಸರ್ ತೆರಳುತ್ತದೆ. ಸಾವಿರಾರು ಕೈದಿಗಳನ್ನು ಬಂಧಿಸಿಟ್ಟ ಜೈಲು ಕಾಣಿಸುತ್ತದೆ. ಕುದುರೆ ಮೇಲೆ ಒಬ್ಬ ಬಂದಾಗ ಜನರು ಹರ್ಷ ವ್ಯಕ್ತಪಡಿಸುತ್ತಾರೆ. ಉಪೇಂದ್ರನ ಯುಐ ಮುಖ ತೋರಿಸಲಾಗುತ್ತದೆ.
ಒಟ್ಟಾರೆ ಟೀಸರ್ ನಮ್ಮನ್ನು ಒಂದು ಭ್ರಮಾ ಜಗತ್ತಿಗೆ ಕೊಂಡೊಯುತ್ತದೆ. ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಾಧು ಕೋಕಿಲ ಹಾಗೂ ರವಿ ಶಂಕರ್ ಪಾತ್ರಗಳು ಗಮನ ಸೆಳೆದಿವೆ ಯುಐ ಚಿತ್ರವನ್ನು ಜಿ ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಯುಐ ಪ್ರಪಂಚಾದ್ಯಂತ ಒಟ್ಟು ೮ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಸಿನೆಮಾ ತಂಡ ಅಪ್ ಡೇಟ್ ಗಳನ್ನ ಕೊಡಲಿದೆ.