ಬೆಂಗಳೂರು, (www.thenewzmirror.com) :
ಮಾಜಿ ಸಚಿವ ಕೆ ಗೋಪಾಲಯ್ಯ ಗೆ ಪಾಲಿಕೆ ಮಾಜಿ ಸದಸ್ಯ ಪದ್ಮ ರಾಜ್ ಎಸ್ ಎಂಬುವವರು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಗೋಪಾಲಯ್ಯ ಸ್ಪೀಕರ್ ಯು ಟಿ ಖಾದರ್ ಹಾಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೂ ದೂರು ನೀಡಿದ್ದಲ್ಲದೆ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ.
ಇನ್ನು ಇದೇ ವಿಚಾರವಾಗಿ ವಿಧಾನಸೌಧದಲ್ಲಿ ಕೆ. ಗೋಪಾಲಯ್ಯ ಪ್ರತಿಕ್ರಿಯೆ ನೀಡಿ, ರಾತ್ರಿ 11.1 ನಿಮಿಷದಲ್ಲಿ ಬಸವೇಶ್ವರ ನಗರ ಪದ್ಮರಾಜ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಗೂಂಡಾ ವರ್ತನೆ ಮಾಡಿದ್ದಾರೆ. ಅತ್ಯಂತ ಕೆಟ್ಟ ಪದದಿಂದ ನನ್ನ ನಿಂದಿಸಿದ್ದಾನೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಪೊಲೀಸರ ಬಳಿ ಮಾತನಾಡಿದ್ದೇನೆ ಎಂದರು.
ಈಗಾಗಲೇ ಬೆದರಿಕೆ ಬಗ್ಗೆ ಸ್ಪೀಕರ್ ಖಾದರ್ ಅವರಿಗೆ ದೂರು ನೀಡಿದ್ದು, ಸದನದಲ್ಲೂ ಚರ್ಚೆಗೆ ಅವಕಾಶ ಕೇಳಿದ್ದೇನೆ ಎಂದರು. ಪದ್ಮರಾಜ್ ನನಗೆ ಹಳೇ ಪರಿಚಯ. ಅವರ ಮಗಳಿಗೆ ಕೆಲಸ ಕೊಡಿಸಿದ್ದೇನೆ. ಹಲವು ಬಾರಿ ನನ್ನಿಂದ ಅನುಕೂಲ ಪಡೆದುಕೊಂಡಿದ್ದಾರೆ. ನನಗೆ ಮಾತ್ರವಲ್ಲ, ಹಲವರಿಗೆ ಇದೇ ರೀತಿ ಬೆದರಿಕೆ ಹಾಕಿದ್ದಾರೆ ಎಂದರು. ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.