ಬೆಂಗಳೂರು, (www.thenewzmirror.com) :
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ದೃಢವಾಗಿದೆ. ಸಂವಾದ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಇದು ದೃಢ ಪಟ್ಟಿದ್ದು, ಈ ಕುರಿತಂತೆ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದು ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂದು ಆಕ್ರೋಶ ಹೊರಹಾಕಿದೆ.
ಫೆಬ್ರವರಿ 27ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರು ಜಯಗಳಿಸಿದ್ದರು ಈ ವೇಳೆ ಅವರ ಬೆಂಬಲಿಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ.ಈ ಕುರಿತಂತೆ ತೀವ್ರ ವಿರೋಧವಾದ ವ್ಯಕ್ತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಫ್ ಎಸ್ ಎಲ್ ತನಿಖೆಗೆ ನೀಡಿದಾಗ ಅದರಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ದೃಢವಾಗಿದೆ. ಆದರೆ ರಾಜ್ಯ ಸರ್ಕಾರ ಇದುವರೆಗೂ ಈ ಕುರಿತಂತೆ ಅಧಿಕೃತವಾಗಿ ಏನು ತಿಳಿಸಿಲ್ಲ.
ಇನ್ನು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ ಎಂದು ಆರೋಪಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ.
ರಾಷ್ಟ್ರ ವಿರೋಧಿ ಧೋರಣೆಯ ರಾಜ್ಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ವಾಗ್ದಾಳಿ ನಡೆಸಿದೆ.
ಇನ್ನು ವರದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, FSL ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಎಂದು ಹೇಳಿದ್ದಾರೆ.