ಬೆಂಗಳೂರು(www.thenewzmirror.com): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಾಂವಿಧಾನಿಕ ಚೌಕಟ್ಟು ಮೀರುವವರ ವಿರುದ್ಧ ಕ್ರಮ ಜರುಗಿಸುವಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದು ಗೃಹ ಇಲಾಖೆಯು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳೊಂದಿಗೆ ಗೃಹ ಇಲಾಖೆಯ ಉನ್ನತ ಮಟ್ಟದ ಔಪಚಾರಿಕ ಮಾಹಿತಿ ವಿನಿಮಯ ಸಭೆ ನಡೆಯಿತು. ಈ ವೇಳೆ ರಾಜ್ಯದ ಸದ್ಯದ ಕಾನೂನು ಸುವ್ಯವಸ್ಥೆಯ ಸ್ಥಿತಿಗತಿಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಮುಜುಗರ ತಂದರೆ ಸಹಿಸಲ್ಲ:
ರಾಜ್ಯದ ಅಪರಾಧ ಪ್ರಕರಣಗಳು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ, ಕಾನೂನು ಸುವ್ಯವಸ್ಥೆ ಹಾಗೂ ಮಾದಕವಸ್ತುಗಳ (ಡ್ರಗ್ಸ್) ನಿಯಂತ್ರಣದ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಪೊಲೀಸ್ ಮಹಾನಿರ್ದೇಶಕರ ವ್ಯಾಪ್ತಿಯಲ್ಲಿ ಬರುವ 6 ಕಮೀಷನರೇಟ್‌ಗಳ ಕಾರ್ಯವೈಖರಿಯನ್ನು ಪರಾಮರ್ಶಿಸಿದ ಗೃಹ ಇಲಾಖೆಯು, ಸಂವಿಧಾನದ ಚೌಕಟ್ಟನ್ನು ಮೀರಿ ನಡೆಯುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಮುಜುಗರ ತರುವಂತಹ ನಡವಳಿಕೆ ಅಥವಾ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ತಿಳಿಸಿತು.
ಪ್ರತಿದಿನ ವಸ್ತುಸ್ಥಿತಿ ಪರಿಶೀಲನೆ:
ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ 16 ಯೂನಿಟ್‌ಗಳ ಪ್ರಸ್ತುತ ಸ್ಥಿತಿಗತಿಗಳ ಮೇಲೆ ನಿಗಾ ಇಡಲು ಹೊಸ ಸೂತ್ರವನ್ನು ಸಭೆಯಲ್ಲಿ ಹೆಣೆಯಲಾಗಿದೆ. ಇದರ ಅನ್ವಯ, ಪ್ರತಿದಿನ ಕಡ್ಡಾಯವಾಗಿ 3 ಯೂನಿಟ್‌ಗಳ ವಸ್ತುಸ್ಥಿತಿಯನ್ನು ತಳಮಟ್ಟದಲ್ಲಿ ಪರಿಶೀಲನೆ ನಡೆಸಿ, ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಲಾಗಿದೆ.







