ಬೆಂಗಳೂರು(www.thenewzmirror.com): ಸಚಿವ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆ ಕುರಿತ ಅಸಮಾಧಾನವನ್ನು ಶಮನಗೊಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಡರಾತ್ರಿಯವರೆಗೆ ಸಂಧಾನ ಸಭೆ ನಡೆಸಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಸಚಿವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಇದು ನಮ್ಮ ಕುಟುಂಬದ ಆಂತರಿಕ ವಿಚಾರ. ನಾವೇ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿಯಾಗಿದ್ದರೂ, ರಾಮಲಿಂಗಾರೆಡ್ಡಿ ಅವರು ಸಚಿವರಾಗಿದ್ದರೂ ನಾವೆಲ್ಲರೂ ಆತ್ಮೀಯ ಸ್ನೇಹಿತರು,” ಎಂದು ಸ್ಪಷ್ಟಪಡಿಸಿದರು.
ಪಕ್ಷದ ಶಕ್ತಿ:
“ರಾಮಲಿಂಗಾರೆಡ್ಡಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಬೆಂಗಳೂರಿನಲ್ಲಿ ಪಕ್ಷವನ್ನು ಗಟ್ಟಿಯಾಗಿ ಉಳಿಸಿ, ಬೆಳೆಸುತ್ತಿರುವ ಪ್ರಮುಖ ಶಕ್ತಿ ಅವರಾಗಿದ್ದಾರೆ,” ಎಂದು ಸಿಎಂ ಶ್ಲಾಘಿಸಿದರು.
ಖಾತೆ ಬದಲಾವಣೆ ಸಸ್ಪೆನ್ಸ್:
ರೆಡ್ಡಿ ಅವರು ಪ್ರಸ್ತುತ ಖಾತೆಯಲ್ಲೇ ಮುಂದುವರಿಯುತ್ತಾರೆಯೇ ಅಥವಾ ಹೊಸ ಖಾತೆಗೆ ಒಪ್ಪಿಕೊಂಡಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಖಾತೆ ವಿಚಾರವಾಗಿ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಿದೆ ಎಂಬುದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ತಪ್ಪು ಸಂವಹನದಿಂದಾಗಿ ನೋವುಂಟಾಗುವುದು ಸಹಜ. ಎಲ್ಲವನ್ನೂ ಸರಿಪಡಿಸಲಾಗುವುದು,” ಎಂದರು.
ಅಲ್ಲದೆ, “ರಾಮಲಿಂಗಾರೆಡ್ಡಿ ಅವರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ರಾಜಕೀಯದಲ್ಲಿ ಇಂತಹ ಏರಿಳಿತಗಳು ತೀರಾ ಸಹಜ. ಮಳೆ, ಗುಡುಗು, ಸಿಡಿಲು ಹಾಗೂ ಸೂರ್ಯನ ಉದಯ-ಅಸ್ತಗಳಂತೆ ಇವೆಲ್ಲವೂ ರಾಜಕೀಯದ ಭಾಗ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.







