ಬೆಂಗಳೂರು, ( www.thenewzmirror.com) ;
ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯಗಳನ್ನ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ಸರ್ಕಾರ ಒಲವು ತೋರಿತ್ತು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ್ದ ಪಠ್ಯ ಪುಸ್ತಕವನ್ನ ಮೊದಲಿನಿಂದಲೂ ವಿರೋಧ ಮಾಡಿದ್ದ ಕಾಂಗ್ರೆಸ್ ಶೈಕ್ಷಣಿಕ ವರ್ಷ ಆರಂಭದ ಬೆನ್ನಲ್ಲೇ ಬದಲಾವಣೆಗೆ ಮನಸ್ಸು ತೋರಿದೆ.
ಇದರ ಭಾಗವಾಗಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ
ಮತ್ತೆ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಹೆಚ್ಚಿನ ಒಲವು ತೋರಲಾಗಿತ್ತು. ಈ ಸಂಬಂಧ ನಿನ್ನೆ ನಡೆದ ಸಭೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆಗೆ ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದರು.
ಆದರೆ ಸರ್ಕಾರದ ಪ್ರಸ್ತಾವನೆಯನ್ನ ತಿರಸ್ಕಾರ ಮಾಡಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಹೊಸ ಸಮಿತಿ ರಚನೆ ಆಗಿಲ್ಲ, ಸಮಿತಿ ಅಧ್ಯಕ್ಷನಾಗಲು ನಾನು ಒಪ್ಪಿಗೆ ನೀಡಿಲ್ಲ, ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ನಾನು ಹಿಂದೆ ಸರಿದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.