ಬೆಂಗಳೂರು,(www.thenewzmirror.com):
ಕೋವಿಡ್ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಸೋಂಕಿತರಿಗೆ ನೀಡಿದ್ದ ಚಿಕಿತ್ಸೆಗೆ ಅಂತ ದುಬಾರಿ ಹಣ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗಳಿಗೆ ಇದೀಗ ಹೈ ಕೋರ್ಟ್ ಛಾಟಿ ಬೀಸಿದೆ.
ಕೋವಿಡ್ ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ವಸೂಲಿ ಮಾಡಿದ್ದರ ವಿರುದ್ಧ ಸಾಕಷ್ಟು ಅಸಮಧಾನ ಹೊರಬಿದ್ದಿತ್ತು. ಇದೀಗ ವಿಚಾರಣೆ ನಡೆಸಿದ ಘನ ನ್ಯಾಯಾಲಯ ರಾಜ್ಯ ಹಾಗೂ ಬಿಬಿಎಂಪಿಗೆ ಖಡಕ್ ಸೂಚನೆ ನೀಡಿದೆ.
ಕೋವಿಡ್ ಚಿಕಿತ್ಸೆಗಾಗಿ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜನರು ದೂರು ಸಲ್ಲಿಸಲು ಅನುಕೂಲವಾಗುವಂತೆ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಾಕುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸರ್ಕಾರಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹೆಚ್ಚುವರಿ ಶುಲ್ಕ ವಿಧಿಸಿರುವ ಖಾಸಗಿ ಆಸ್ಪತ್ರೆಗಳ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರವನ್ನು ಕೇಳಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಶುಲ್ಕ ವಿಧಿಸಿರುವ ಆಸ್ಪತ್ರೆಗಳ ಪಟ್ಟಿ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಮಾಡಿದ ರೋಗಿಗಳಿಂದ 1,98,83,498 ರೂ.ಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಿವೆ ಮತ್ತು ಇದುವರೆಗೆ 32,22,352 ರೂ.ಗಳನ್ನು ರೋಗಿಗಳಿಗೆ ಹಿಂತಿರುಗಿಸಲಾಗಿದೆ ಎಂದೂ ರಾಜ್ಯ ಕೋರ್ಟ್ ಗೆ ಮಾಹಿತಿ ನೀಡಿದೆ.
ಹಾಗೆನೇ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ 1,55,91,845 ರೂ ಹೆಚ್ಚುವರಿ ಶುಲ್ಕವನ್ನು ಅವರು ನೇರವಾಗಿ ಸಂಗ್ರಹಿಸಿದ್ದರು ಮತ್ತು ಅವರು ರೋಗಿಗಳಿಗೆ ರೂ 10, 42,339 ಮರುಪಾವತಿ ಮಾಡಿದ್ದಾರೆ. ಈ ಕುರಿತು ದೂರುಗಳನ್ನು ಸ್ವೀಕರಿಸಲು ಸ್ಥಾಪಿಸಲಾದ ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ ಸಹಾಯವಾಣಿ ಇದುವರೆಗೆ 1,325 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಮುಂದಿನ ವಿಚಾರಣೆಯ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಹಿಂದಿರುಗಿಸಲಾದ ಹೆಚ್ಚುವರಿ ಶುಲ್ಕದ ವಿವರಗಳನ್ನು ಒದಗಿಸುವಂತೆ ಪೀಠವು ಸರ್ಕಾರ ಮತ್ತು ಬಿಬಿಎಂಪಿಗೆ ಸೂಚಿಸಿತು.
ಸರ್ಕಾರ ನಿಗದಿ ಮಾಡಿದ ದರ
ಸಾಮಾನ್ಯ ವಾರ್ಡ್‌ಗೆ 10 ಸಾವಿರ
ವೆಂಟಿಲೇಟರ್ ಇಲ್ಲದ ಐಸಿಯುಗೆ 15 ಸಾವಿರ
ಎಚ್‌ಡಿಯುಗೆ 12 ಸಾವಿರ
ವೆಂಟಿಲೇಟರ್ ಸೌಲಭ್ಯವಿರುವ ಐಸಿಯುಗೆ 25 ಸಾವಿರ ರೂ. ನಿಗದಿ ಮಾಡಿತ್ತು.
ಆದರೆ ಖಾಸಗಿ ಆಸ್ಪತ್ರೆಗಳು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಲಾಗಿತ್ತು. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸಿದರೆ ಮತ್ತು ಕೋವಿಡ್ ರೋಗಿಗಳ ಚಿಕಿತ್ಸೆಗೆ ನಿರಾಕರಿಸಿದರೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಸರ್ಕಾರ ಇದೇ ವೇಳೆ ಮಾಹಿತಿ ನೀಡಿದೆ.