ಬೆಂಗಳೂರು, (www.thenewzmirror.com) :
ನಾನಾ ಕಾರಣಗಳಿಂದ ರದ್ದುಗೊಳಿಸಲಾಗಿದ್ದ ಕಿಚ್ಚ ಸುದಿಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಫಿಲ್ಮಂ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ. ಈ ವಿಚಾರವನ್ನ ಸ್ವತಃ ಕಿಚ್ಚ ಸುದೀಪ ಮಾಹಿತಿ ನೀಡಿದ್ದಾರೆ.
ಹಲವು ವರ್ಷಗಳ ನಂತರ ನೆಚ್ಚಿನ ನಾಯಕ ನಟನನ್ನ ಬಿಗ್ ಸ್ಕ್ರೀನ್ ಮೇಲೆ ನೋಡೋಕೆ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ನಿರಾಸೆಯುಂಟಾಗಿತ್ತು…, ಟಿಕೆಟ್ ಖರೀದಿಸಿ ಸಿನೆಮಾ ನೋಡ್ಬೇಕು ಅಂತ ಅನ್ನುವಷ್ಟರಲ್ಲೇ ಶೋ ರದ್ದಾಗಿದೆ ಅನ್ನೋ ವಿಚಾರವನ್ನ ಅಭಿಮಾನಿಗಳಿಗೆ ಅರಗಿಕೊಳ್ಳೋಕೆ ಆಗ್ಲಿಲ್ಲ.., ಹೀಗಾಗಿ ರಾಜ್ಯದ ಹಲವೆಡೆ ಗಲಾಟೆಯನ್ನೂ ನಡೆಸಿದ್ರು..
ಯಾವಾಗ ಅಭಿಮಾನಿಗಳ ಗಲಾಟೆ ಹೆಚ್ಚಾಗತೊಡಗಿತೋ ತಕ್ಷಣವೇ ಕಿಚ್ಚ ಸುದೀಪ ಸ್ಪಷ್ಟನೆ ನೀಡಿದ್ದಾರೆ. ಅಭಿಮಾನಿಗಳಿಗೆ ಕಿಚ್ಚ ಟ್ವೀಟ್ ಮಾಡುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ರು.
ಕಿಚ್ಚನ ಅಭಿಮಾನಿಗಳಿಗೆ ಮಾಡಿದ ಟ್ವೀಟ್ ನಲ್ಲಿ ಏನಿದೆ…?
ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವವರಿಗೆ, ಬರುತ್ತಿರುವವರಿಗೆ, ಚಿತ್ರದ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ. ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ. ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೇ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ಯಾವುದೇ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಹಾಗೆನೇ ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕಿಚ್ಚ ಧೈರ್ಯ ತುಂಬಿದ್ದು, ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಾಬು ಅವರು ಅಪ್ಲೋಡ್ ಮಾಡಿದ ವೀಡಿಯೋ ನಾನು ನೋಡಿದೆ. ನೀವೊಬ್ಬರೇ ಅಲ್ಲ ನಿಮ್ಮ ಜೊತೆ ನಾವಿದ್ದೇವೆ. ಯಾರಿಂದ ತೊಂದರೆ ಆಗಿದೆ, ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾಳೆಯಿಂದ ಪ್ರದರ್ಶನ ಕಾಣುತ್ತದೆ. ಭರ್ಜರಿಯಾಗಿ ಹೋಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ.