ಬೆಂಗಳೂರು, (www.thenewzmirror.com);
ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಕರ್ನಾಟಕ ಸಂಭ್ರಮ – 50 ಎಂಬ ವಿಶೇಷ ಸರಣಿ ಕಾರ್ಯಕ್ರಮ ಮತ್ತು ‘ಹೆಸರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಅದರ ಭಾಗವಾಗಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ರಾಮನಗರ, ಚನ್ನಪಟ್ಟಣ, ಕನಕಪುರ,ಹಾರೋಹಳ್ಳಿ ಸೇರಿದಂತೆ ಗ್ರಾಮಾಂತರ ಪ್ರದೇಶಗಳ 10 ಸರ್ಕಾರಿ ಕಾಲೇಜಿನಲ್ಲಿ ಕನ್ನಡ,ಕನ್ನಡಿಗ,ಕರ್ನಾಟಕ ಏಕೀಕರಣ ಚಳುವಳಿ,ಭಾಷೆಯ ಮಹತ್ವ,ಕನ್ನಡ ಸಾಹಿತ್ಯ,ಸಂಸ್ಕೃತಿ,ಆಚಾರ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ಮಾಲಿಕೆಯನ್ನು ಯಶಸ್ವಿಯಾಗಿ ನಡೆಸಿದೆ.ಒಂದು ವರ್ಷ ಹಿಡಿಯುವ ಕಾರ್ಯಕ್ರಮವನ್ನು ಮೂರು ತಿಂಗಳಲ್ಲಿ ಯಶಸ್ವಿಯಾಗಿ ಪೂರೈಸಿ ಬೆಂ.ವಿ.ವಿ ವಿಶಿಷ್ಟ ಸಾಧನೆ ಮಾಡಿದೆ.
ಉಳಿದ ವಿಶ್ವವಿದ್ಯಾಲಯಗಳು ಇನ್ನೂ ಕರ್ನಾಟಕದ 50 ವರ್ಷದ ಕಾರ್ಯಕ್ರಮದ ರೂಪುರೇಷೆ ಸಿದ್ದಮಾಡುವಷ್ಟರಲ್ಲಿ ಬೆಂ.ವಿ.ವಿ ಕಾರ್ಯಕ್ರಮದ ಸಮಾರೋಪವನ್ನು ಮಾಡಿ ಮುಗಿಸಿದೆ.
ದಶೋಪನ್ಯಾಸ ಮಾಲಿಕೆಯ ಸಮಾರೋಪ ಕಾರ್ಯಕ್ರಮವೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ವೆಂಕಟಗಿರಿ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಡಾ.ಜಯಕರ ಎಸ್ ಎಂ ಮಾತನಾಡಿ, ಅಭಿಯಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ವಿವಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿದ್ದು ಮತ್ತೊಮ್ಮೆ ಅದನ್ನು ಸಾಬೀತು ಪಡಿಸಿದೆ ಎಂದರು.
ಈ ಅಭಿಯಾನದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೂ ಕನ್ನಡದ ಹಿರಿಮೆ,ಗರಿಮೆಯನ್ನು ಸಾರಿದೆ.ವಿದ್ಯಾರ್ಥಿಗಳು ಕೂಡ ಕನ್ನಡದ ಮಹತ್ವವನ್ನು ಅರಿತು,ಕನ್ನಡತನವನ್ನು ಪ್ರದರ್ಶಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಭಿಯಾನದ ವಿಶೇಷತೆ
– 10 ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜನೆ
– ಕನ್ನಡ,ಕರ್ನಾಟಕ ಕುರಿತು ವಿಚಾರ ಸಂಕೀರ್ಣ ಆಯೋಜನೆ
– ವಿದ್ಯಾರ್ಥಿಗಳಲ್ಲಿ ಕನ್ನಡದ ಕುರಿತು ಅರಿವು ಮೂಡಿಸುವ ಪ್ರಯತ್ನ
– ರಾಜ್ಯದಲ್ಲಿ ಪ್ರಥಮ ವಿವಿಯಾಗಿ ಅಭಿಯಾನ ಅನುಷ್ಠಾನ
ಕಾರ್ಯಕ್ರಮದ ರೂವಾರಿಯಾಗಿದ್ದು ಹಿಂದುಳಿದ ವರ್ಗಗಳ ಕೋಶದ ವಿಶೇಷಾಧಿಕಾರಿಗಳಾಗಿರುವ ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ್ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಕನ್ನಡದ ಅಸ್ಮಿತೆಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸವಾಗಿದೆ. ವಿಶ್ವವಿದ್ಯಾಲಯವು ಜ್ಞಾನವನ್ನು ಬಿತ್ತಬೇಕು,ಜ್ಞಾನಿಗಳನ್ನು ಬೆಳೆಯಬೇಕು, ಬೆಂಗಳೂರು ವಿವಿ ಆ ಕೆಲಸ ಮಾಡುತ್ತಿದೆ. ಇಡೀ ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಕೀರ್ತಿ ವಿಶ್ವವಿದ್ಯಾಲಯಕ್ಕೆ ಸೇರುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು, ಕುಲಪತಿ ಡಾ ಜಯಕರ ಎಸ್ ಎಂ, ಕುಲಸಚಿವ ಶೇಕ್ ಲತೀಫ್ ಕೆ.ಎ.ಎಸ್,ಪ್ರಾಧ್ಯಾಪಕ ಪ್ರೊ.ಡಿ.ಕೆ.ಚಿತ್ತಯ್ಯ ಪೂಜಾರ್, ಪ್ರೊ.ನಾಗಭೂಷಣ, ಪ್ರೊ ಎಸ್ ಆರ್ ಕೇಶವ, ಪ್ರೊ ನಿರ್ಮಲ ಕೆ ಸೇರಿದಂತೆ ವಿದ್ಯಾರ್ಥಿಗಳು,ಶಿಕ್ಷಕರು
ಉಪಸ್ಥಿತರಿದ್ದರು.