ಬೆಂಗಳೂರು, (www.thenewzmirror.com);
ಕೆಡಿಇಎಂ ಇತ್ತೀಚೆಗೆ ಕೈಗೊಂಡಿದ್ದ ಸೌದಿ ರೋಡ್‌ಶೋ ಯಶಸ್ವಿಯಾಗಿದ್ದು,ಮಂಗಳೂರು ಡಿಜಿಟಲ್ ಎಕಾನಮಿ ಕ್ಲಸ್ಟರ್‌ನಲ್ಲಿ ಉದ್ದಿಮೆ ಆರಂಭಿಸಲು ಆಸಕ್ತಿ ತೋರಿ ಸೌದಿ ಅರೇಬಿಯಾದ ಕಂಪನಿಗಳು 25ಕ್ಕೂ ಹೆಚ್ಚು ಲೆಟರ್ ಆಫ್ ಇಂಟೆಂಟ್ (LoIs)ಗೆ ಸಹಿ ಹಾಕಿವೆ.
ಇದರಿಂದ ರಾಜ್ಯಕ್ಕೆ ಹೆಚ್ಚು ಬಂಡವಾಳ ಹರಿದುಬರಲಿದ್ದು, ಸ್ಥಳೀಯವಾಗಿ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
ದೇಶದ ‘ಸಿಲಿಕಾನ್ ಬೀಚ್’ ಎಂದೇ ಹೆಸರು ಮಾಡಿರುವ ಮಂಗಳೂರು ಕ್ಲಸ್ಟರ್ ನೇತೃತ್ವದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಇದೇ ಸೆಪ್ಟೆಂಬರ್ 7 ರಂದು ಸೌದಿ ಅರೇಬಿಯಾದ ಅಲ್-ಖೋಬರ್‌ನಲ್ಲಿ ನಡೆಸಿದ ರೋಡ್‌ಶೋ ವೇಳೆ ಸಂಭವನೀಯ ಹೂಡಿಕೆದಾರರೊಂದಿಗೆ ಫಲಪ್ರದ ಮಾತುಕತೆ ನಡೆಸಿದೆ. ಈ ಮೂಲಕ ಮಂಗಳೂರು ಕ್ಲಸ್ಟರನ್ನು ಉದಯೋನ್ಮುಖ ತಂತ್ರಜ್ಞಾನ ಕೇಂದ್ರ ಮತ್ತು ಹೂಡಿಕೆಯ ತಾಣವನ್ನಾಗಿ ಬಿಂಬಿಸುವ ಪ್ರಯತ್ನ ಯಶಸ್ವಿಯಾಗಿದೆ.
ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ, ಮಂಗಳೂರು ಕ್ಲಸ್ಟರ್‌ನ ಲೀಡ್ ಇಂಡಸ್ಟ್ರಿ ಆಂಕರ್ ರೋಹಿತ್ ಭಟ್ ಮತ್ತು ನಾಸ್ಕಾಮ್ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ವರ್ಮಾ ಅವರು ಸೌದಿಯ ಸಂಭಾವ್ಯ ಹೂಡಿಕೆದಾರರೊಂದಿಗೆ ಸಂವಾದ ನಡೆಸಿದ್ದಾರೆ.ನೊವಿಗೊ ಸೊಲ್ಯೂಷನ್ಸ್‌ನ ಸಿಟಿಒ ಮೊಹಮ್ಮದ್ ಹನೀಫ್, ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂ ಲಿಮಿಟೆಡ್‌ನ ಸಿಇಒ ಮೊಹಮ್ಮದ್ ಆಶಿಫ್, ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಕುಮಾರ್ ಕಲಬಾವಿ, ಮಂಗಳೂರು ಪ್ರತಿನಿಧಿ ಶ್ಯಾಮಪ್ರಸಾದ್ ಹೆಬ್ಬಾರ್, ಗ್ಲೋಟಚ್ ಟೆಕ್ನಾಲಜೀಸನ ಮೊಹಮ್ಮದ್ ಅವೈಸ್, ಪೆಟ್ರೋಕಾನ್ ಇಂಜಿನಿಯರ್ಸ್ ಮತ್ತು ಕನ್ಸಲ್ಟೆಂಟ್ಸ್ ಮತ್ತು ಕೆನರಾ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಕೆಸಿಸಿಐ) ಆಶಿತ್ ಹೆಗ್ಡೆ ನಿಯೋಗದಲ್ಲಿದ್ದರು.
ರಾಜ್ಯದಲ್ಲಿರುವ ಉತ್ತಮ ಕೈಗಾರಿಕಾ ನೀತಿ, ಸಾಮಾಜಿಕ ಮೂಲಸೌಕರ್ಯ, ಕೈಗಾರಿಕೆಗಳಿಗೆ ನೀಡುವ ಪ್ರೋತ್ಸಾಹ ಮತ್ತು ಸಬ್ಸಿಡಿಗಳು, ಲಭ್ಯವಿರುವ ನುರಿತ ಕಾರ್ಯ ಪಡೆ, ಮಂಗಳೂರು ಕ್ಲಸ್ಟರ್‌ನಲ್ಲಿ ಹೂಡಿಕೆ ಮಾಡಿರುವ ಕಂಪನಿಗಳ ವಿವರ ಹಾಗೂ ಬಿಯಾಂಡ್ ಬೆಂಗಳೂರು ಉಪಕ್ರಮದಡಿ ಮುನ್ನೆಲೆಗೆ ಬರುತ್ತಿರುವ ರಾಜ್ಯದ ಉದಯೋನ್ಮುಖ ಟೆಕ್ ಕ್ಲಸ್ಟರ್‌ಗಳ ವಿವರವನ್ನು ರೋಡ್ ಶೋ ವೇಳೆ ಉದ್ಯಮಿಗಳಿಗೆ ನೀಡಲಾಗಿದೆ.
ಬಿಯಾಂಡ್ ಬೆಂಗಳೂರು ಉಕ್ರಮದ ಫಲವಾಗಿ ಮಂಗಳೂರು ಟೆಕ್ ಹಬ್ ಆಗಿ ಅಭಿವೃದ್ಧಿಯಾಗುತ್ತಿರುವ ಅಂಶವನ್ನು ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ ನೇತೃತ್ವದಲ್ಲಿ ನಿಯೋಗವು ಸೌದಿ ಕಂಪನಿಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟಿದೆ.
ನಿಯೋಗದ ಭಾಗವಾಗಿದ್ದ ನಾಸ್ಕಾಮ್ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ವರ್ಮಾ ಅವರು, ರಾಜ್ಯದಲ್ಲಿರುವ ಕೈಗಾರಿಕೆಗಳ ಯಶೋಗಾಥೆಯಲ್ಲಿ ಮಂಗಳೂರಿನ ಪಾತ್ರದ ಮಹತ್ವವನ್ನು ಸೌದಿ ಉದ್ಯಮಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಕ್ಲಸ್ಟರ್‌ನ ಲೀಡ್ ಇಂಡಸ್ಟ್ರಿ ಆಂಕರ್ ರೋಹಿತ್ ಭಟ್, “ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ದಕ್ಷಿಣ ಕನ್ನಡ, ನಾಡಿನ ಖ್ಯಾತ ಉದ್ಯಮಿಗಳ ತವರೂರು. ಕೈಗಾರಿಕಾ ಬೆಳವಣಿಗೆಯಲ್ಲೂ ಜಿಲ್ಲೆ ಮುಂದಿದೆ. ಈ ರೋಡ್‌ಶೋ ಮೂಲಕ, ಸೌದಿ ಅರೇಬಿಯಾದ ಹೂಡಿಕೆದಾರರ ಗಮನ ಸೆಳೆದಿದ್ದೇವೆ. ಸೌದಿಯ ಹಲವಾರು ಕಂಪನಿಗಳು ಮಂಗಳೂರಿಂದ ಕಾರ್ಯಾಚರಣೆ ನಡೆಸಲು ಇಚ್ಛಿಸಿದ್ದಾರೆ. ಇದರಿಂದ ಮಂಗಳೂರು ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆ ಹೆಚ್ಚಿಸಿದೆ. ಫಿನ್‌ಟೆಕ್, ಹೆಲ್ತ್ ಟೆಕ್ ವಲಯ ವರ್ಷದಿಂದ ವರ್ಷಕ್ಕೆ ಅತಿ ವೇಗವಾಗಿ ಬೆಳೆಯುತ್ತಿದ್ದು, ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಸೌದಿ ಅರೇಬಿಯಾದ ಉದ್ಯಮಿಗಳಿಗೆ ಆಹ್ವಾನ ನೀಡಿದ್ದೇವೆ. ಜತೆಗೆ ಸುಲಲಿತ ವ್ಯವಹಾರ, ಸುಸ್ಥಿರತೆಯ ವಿಶ್ವಾಸ ನೀಡಿದ್ದೇವೆ,”ಎಂದರು.
ಯಾವ ಕ್ಷೇತ್ರಗಳಲ್ಲಿ ಹೂಡಿಕೆ?
ಐಟಿ ಸೇವೆ, ಬ್ಯಾಕ್ ಆಫೀಸ್ ಕಾರ್ಯಾಚರಣೆ ಮತ್ತು ಎಂಜಿನಿಯರಿಂಗ್ ವಿನ್ಯಾಸ ಸೇವೆಗಳಿಗಾಗಿ ಮಂಗಳೂರನ್ನು ತಮ್ಮ ಕಂಪನಿಯ ಪ್ರಮುಖ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳಲು ಬಯಸುತ್ತಿರುವುದಾಗಿ ಸೌದಿ ಅರೇಬಿಯಾ ಕಂಪನಿಗಳು ಮಾತುಕತೆ ವೇಳೆ ತಿಳಿಸಿವೆ.