ಹಾವೇರಿ, (www.thenewzmirror.com) :
ನಾನು ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಮೋಸ ಮಾಡಿಲ್ಲ. ನಾನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕೆ.ಈ. ಕಾಂತೇಶ್ ಗೆ ಟಿಕೆಟ್ ಕೊಡುವಂತೆ ಹೇಳಿದ್ದೆ, ಹೈಕಮಾಂಡ್ ನಾಯಕರು ಅನಿವಾರ್ಯತೆ ಇದೆ. ನನಗೆ ಸ್ಪರ್ಧಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಒಪ್ಪಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪುತ್ರನಿಗೆ ಟಿಕೇಟ್ ಸಿಗದಿದ್ದಕ್ಕೆ ಕೆ.ಎಸ್ ಈಶ್ವರಪ್ಪ ಅಸಮಾಧಾನಗೊಂಡಿರುವ ಕುರಿತು ಮಾತನಾಡಿದ ಅವರು, ಈಶ್ವರಪ್ಪ ಅವರ ಸಭೆ ಬಗ್ಗೆ ಮಾಹಿತಿ ಇಲ್ಲ. ಈಶ್ವರಪ್ಪ ಅವರಿಗೆ ಎಲ್ಲಾ ಗೊತ್ತಿದೆ. ನಾನು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಏನ್ ಹೇಳಿದ್ದೆ ಎಂದು ಎಲ್ಲಾ ಅವರಿಗೆ ಗೊತ್ತಿದೆ ಎಂದರು.
ನನ್ನ ಹೆಸರು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಕೂಡಾ ಫೈನಲ್ ಆಗಿರಲಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಡ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರು ಅನಿವಾರ್ಯ ಇದೆ ನೀನು ಸ್ಪರ್ದಿಸು ಎಂದು ಹೇಳಿದರು. ಹೀಗಾಗಿ ನಾನು ಸ್ಪರ್ದೆ ಮಾಡ್ತಿದ್ದೇನೆ ಎಂದು ಹೇಳಿದರು.
ಈ ಪಕ್ಷವನ್ನ ಕಟ್ಟಿ ಬೆಳೆಸಿದವರು ಈಶ್ವರಪ್ಪನವರು. ಶಿಸ್ತಿನ ಸಿಪಾಯಿ ಅವರು ನಾನು ಸಹ ಈಗ ಈಶ್ವರಪ್ಪರ ಜೊತೆಗೆ ಮಾತನಾಡುತ್ತೇನೆ. ಅದು ವರಿಷ್ಠರ ತೀರ್ಮಾನ, ನಾನು ಮೋಸ ಮಾಡಿಲ್ಲ ಎಂದು ಹೇಳಿದರು. ಶಿಗ್ಗಾವಿ ಬೈ ಎಲೆಕ್ಷನ್ ನಡೆದರೆ ಪುತ್ರ ಭರತ್ ಬೊಮ್ಮಾಯಿಗೆ ಟಿಕೇಟ್ ಕೊಡಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ನಾನಿನ್ನೂ ಸ್ಪರ್ಧೆ ಮಾಡಿ ಲೋಕಸಭಾ ಚುನಾವಣೆ ಗೆಲ್ಲಬೇಕು. ಬಳಿಕ ಶಿಗ್ಗಾವಿಗೆ ಉಪಚುನಾವಣೆ ನಡೆಯಲಿದೆ. ಊಹೆ ಮಾಡಿ ನಾನು ಹೇಳಲು ಆಗುವುದಿಲ್ಲ ಎಂದರು.