ಬೆಂಗಳೂರು, (www.thenewzmirror.com) ;
ಬಡವರ ಹೊಟ್ಟೆ ತುಂಬಿಸೀ ಇಂದಿರಾ ಕ್ಯಾಂಟೀನ್ ನಲ್ಲಿ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ. ಹೀಗೆ ಬಡವರಿಂದ ಹಣ ವಸೂಲಿ ಮಾಡುತ್ತಿದ್ದ ಕ್ಯಾಂಟೀನ್ ಸಿಬ್ಬಂದಿ ಡಿಸಿಎಂ ಡಿಕೆ ಶಿವಕುಮಾರ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಬೆಳಗ್ಗೆ ದಿಢೀರ್ ಬೆಂಗಳೂರು ಪ್ರದಕ್ಷಿಣೆ ಹಮ್ಮಿಕೊಂಡಿದ್ದರು. ಮೊದಲಿಗೆ ದಾಸರಹಳ್ಳಿ ವಲಯದ ವಾರ್ಡ್ ಸಂಖ್ಯೆ 39 ಚೊಕ್ಕಸಂದ್ರದ ಇಂದಿರಾ ಗಾಂಧಿ ಕ್ಯಾಂಟೀನ್ ಗೆ ಭೇಟಿ ನೀಡಿದ್ರು.
ಬೆಳಗ್ಗೆ 9.10 ಆಗಿದ್ದರೂ ತಿಂಡಿ ಖಾಲಿ ಆಗಿತ್ತು. ಕೇವಲ ಒಂದು ಮುಕ್ಕಾಲು ಗಂಟೆಯಲ್ಲಿ 208 ಮಂದಿ ತಿಂಡಿ ತಿಂದಿದ್ದಾರೆ ಎಂದು ಕ್ಯಾಂಟೀನ್ ಮ್ಯಾನೇಜರ್ ಡಿಕೆಶಿಗೆ ಮಾಹಿತಿ ನೀಡಿದ್ರು.
ಬೆಳಗ್ಗೆ 7.30 ರಿಂದ 9.30 ರ ತನಕ ಬೆಳಗ್ಗೆ ತಿಂಡಿ ವಿತರಿಸಬೇಕು. ಅವಧಿ ಮುಗಿಯುವ ಒಳಗೆ ಇನ್ಮುಂದೆ ತಿಂಡಿ ಖಾಲಿ ಮಾಡಬಾರದು, ಒಂದು ವೇಳೆ ಖಾಲಿ ಆದರೂ ಸಾಕಷ್ಟು ಪ್ರಮಾಣದಲ್ಲಿ ತಿಂಡಿ ಪೂರೈಕೆ ಆಗಬೇಕೆಂದು ಸೂಚನೆ ನೀಡಿದ್ರು.
ಇದಾದ ಬಳಿಕ ಡಿಕೆಶಿ ಸಾರ್ವಜನಿಕರ ಜತೆ ಉಪ್ಪಿಟ್ಟು ಕೇಸರಿಬಾತ್ ಸವಿದ್ರು. ಈ ವೇಳೆ ತಿಂಡಿ ತಿನ್ನುತ್ತಿದ್ದವರನ್ನ ಮಾತನಾಡಿಸಿದಾಗ ಕ್ಯಾಂಟೀನ್ ಸಿಬ್ಬಂದಿ ₹5 ಬದಲು ₹10 ಪಡೆದಿರುವುದು ಗಮನಕ್ಕೆ ಬಂತು.
ಕೂಡಲೇ ಮ್ಯಾನೇಜರ್ ರನ್ನ ತರಾಟೆಗೆ ತೆಗೆದುಕೊಂಡ ಡಿಕೆಶಿ ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚನೆ ಕೊಟ್ರು. ಅಷ್ಟೇ ಅಲ್ದೆ ಇನ್ಮುಂದೆ ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.